ಕರಡಘ್ : ಅನಟೋಲಿಯದ ಕರಮನ್ ಜಿಲ್ಲೆಯಲ್ಲಿ, ಹಿಟ್ಟೈಟ್ ಸಾಮ್ರಾಜ್ಯ ಕಾಲದ ಅವಶೇಷಗಳನ್ನೊಳಗೊಂಡಿರುವ ಒಂದು ನೆಲೆ. ಸುಪ್ರಸಿದ್ಧವಾಗಿ 1001 ಚರ್ಚುಗಳ ಅವಶೇಷಗಳು ಕರಡಘ್ ಬೆಟ್ಟದ ಇಳಿಜಾರಿನಲ್ಲಿ ಕಂಡುಬರುತ್ತವೆ. ಬೆಟ್ಟದ ಮೇಲೆ ಇರುವ ಅವಶೇಷ ಗುಹಾ ದೇವಾಲಯದ ಗುಂಪಿಗೆ ಸೇರುತ್ತದೆ. ಇಲ್ಲಿಯ ಬಂಡೆಯ ಮೇಲೆ ಒಂದು ಚಿತ್ರಲಿಪಿಯ ದೀರ್ಘವಾದ (ಹೈರೊಗ್ಲಿಫಿಕ್) ಶಾಸನವಿದೆ. ಬೆಟ್ಟದ ಪಶ್ಚಿಮಭಾಗದ ಕಿಜಿಲ್ಡಫ್ ಶ್ರೇಣಿಯಲ್ಲಿ ಮತ್ತೊಂದು ದೇವಾಲಯವಿವೆ. ಬೆಟ್ಟದ ಸುತ್ತುಪ್ರದೇಶದ ಸುಂದರ ದೃಶ್ಯ ಕಾಣಬರುವ ಈ ಸ್ಥಳದಲ್ಲಿ ಬೃಹದಾಕಾರದ ಒಂದು ಕಲ್ಲಿನ ಆಸನವನ್ನು ಕೆತ್ತಲಾಗಿದೆ. ಈ ಆಸನದ ಮೇಲೆ ಕುಳಿತಿರುವ ರಾಜನೊಬ್ಬನ ಉಬ್ಬುರೇಖಾಚಿತ್ರವನ್ನೂ ಎರಡು ಚಿತ್ರಲಿಪಿ ಶಾಸನಗಳನ್ನೂ ಕೆತ್ತಲಾಗಿದೆ. ಈ ಎರಡು ಸ್ಥಳಗಳಲ್ಲೂ ಕೆತ್ತಲಾಗಿರುವ ಚಕ್ರವರ್ತಿಯ ಹೆಸರು ಒಂದೇ, ಆ ಚಕ್ರವರ್ತಿಯನ್ನು ಮುನಿಸಿಪಲ್ ಚಕ್ರವರ್ತಿಯ ಮಗನೆಂದು ಹೇಳಲಾಗಿದ್ದರೂ ಆತ ಯಾರೆಂಬುದು ಖಚಿತವಾಗಿ ತಿಳಿದು ಬಂದಿಲ್ಲ.        	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ